ಆತ್ಮತ್ಯಾಗ
ಎಂದರೆ ಸ್ವಾರ್ಥವನ್ನು ಬಿಟ್ಟು ಬಾಳುವುದು. ಸ್ವಾರ್ಥ ತ್ಯಾಗವೇ ಒಳ್ಳೆಯ ನಡತೆಯ ಅಡಿಗಲ್ಲು ಎಂಬುದಾಗಿ ಕೆಲವು ಮತಮೀಮಾಂಸಕರೂ ಧರ್ಮಮೀಮಾಂಸಕರೂ ರಾಷ್ಟ್ರನೀತಿಶಾಸ್ತ್ರಜ್ಞರೂ ಎಣಿಸಿರುತ್ತಾರೆ. ಕೆಲವು ಕ್ರೈಸ್ತಮತ ಮೀಮಾಂಸಕರೂ ಶಿವಶರಣರೂ ಬಹುಶಃ ಎಲ್ಲ ಏಕದೇವತಾವಾದಿಗಳೂ ನಾನು, ನನ್ನದು ಎಂಬ ಭಾವನೆ ಸಂಪೂರ್ಣವಾಗಿ ತ್ಯಜಿಸಿ ಎಲ್ಲವನ್ನೂ ಭಗವಂತನಿಗೆ ಅರ್ಪಿಸಿದಂತೆ ಬಾಳುವುದೇ ಮೋಕ್ಷದ ದಾರಿ ಎಂದು ನಂಬಿರುತ್ತಾರೆ. ಆದರೆ ಆತ್ಮತ್ಯಾಗ ಕೇವಲ ಈ ಏಕದೇವತಾವಾದಿಗಳಿಗೆ ಮೀಸಲಾದದ್ದಲ್ಲ. ಈಶ್ವರನನ್ನು ಒಪ್ಪದ ಸಾಂಖ್ಯದಾರ್ಶನಿಕರೂ ಅವರಿಗಿಂತ ಮಿಗಿಲಾಗಿ ನೈರಾತ್ಮವಾದಿಗಳಾದ ಬೌದ್ಧರೂ ಆತ್ಮತ್ಯಾಗವೇ ಮೋಕ್ಷದ ಹೆದ್ದಾರಿಯೆಂದು ಭಾವಿಸಿರುತ್ತಾರೆ. ಇವರು ಅಕ್ಷರಶಃ ಆತ್ಮತ್ಯಾವಾದಿಗಳು. ಸಾಂಖ್ಯದಾರ್ಶನಿಕರ ಪ್ರಕಾರ ಬುದ್ಧಿ, ಅಹಂಕಾರ, ಮನಸ್ಸು, ಇಂದ್ರಿಯ - ಇವು ನಿಜವಾಗಿ ಪ್ರಕೃತಿಯ ಪರಿಣಾಮಗಳು. ಇವು ಪುರುಷನಿಗೆ ಸೇರಿದುವು. ಪುರುಷ ಕರ್ತ ಎಂಬುದು ದೊಡ್ಡ ಭ್ರಮೆ. ದುಃಖಕ್ರಮಗಳಲ್ಲಿ ಮುಖ್ಯವಾಗಿ ಆಧ್ಯಾತ್ಮಿಕ ದುಃಖಕ್ಕೆ ಈ ಭ್ರಮೆಯೇ ಕಾರಣ. ಪ್ರಕೃತಿಗಿಂತ ತೀರ ಭಿನ್ನವಾದ ಪುರುಷ ಕ್ರಿಯಾರಹಿತವಾದ ಕೇವಲ ಸಾಕ್ಷಿರೂಪದ ಚೈತನ್ಯ ಎಂಬುದು ಇವರ ಪರತತ್ವ. ಪ್ರಕೃತಿಯ ಯಾವ ಪರಿಣಾಮಗಳೂ ಪುರುಷನಿಗೆ ಸೇರಿದುವಲ್ಲ. ಪುರುಷ ಇವುಗಳಿಂದ ತೀರ ಭಿನ್ನ ಎಂಬ ವಿವೇಕ ಹುಟ್ಟಿದಾಗಲೇ ಪುರುಷನಿಗೆ ನಿಜವಾದ ಬಿಡುಗಡೆ. ಸಾಂಖ್ಯರು ನಿಷ್ಕ್ರಿಯ ಪುರುಷನನ್ನಾದರೂ ಒಪ್ಪುತ್ತಾರೆ. ಬೌದ್ಧರಾದರೋ ಈ ನಿಷ್ಕ್ರಿಯ ಪುರುಷನನ್ನೂ ನಿರಾಕರಿಸುತ್ತಾರೆ. ಇವರು ಅಪ್ಪಟ ನೈರಾತ್ಮವಾದಿಗಳು. ಎಲ್ಲ ಬಗೆಯಾದ ಆತ್ಮ ಎಂಬುದು ಶುದ್ಧಾಂಗವಾಗಿ ಮಿಥ್ಯ. ಈ ಭಾವನೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದೇ ನಿರ್ವಾಣಕ್ಕೆ ನಿಜವಾದ ದಾರಿ ಎಂದು ವಾದಿಸುತ್ತಾರೆ. ಈ ದರ್ಶನದಲ್ಲಿ ಆತ್ಮತ್ಯಾಗ ಪರಮಾವಧಿಯನ್ನು ಮುಟ್ಟುತ್ತದೆ.

ಪಾಶ್ಚಾತ್ಯ ತಾತ್ವಿಕರಲ್ಲಿ ಹೆಗೆಲ್ ಮತ್ತು ಅಟವನ ಅನುಯಾಯಿಗಳ ಆತ್ಮಸಿದ್ಧಿ ವಾದವನ್ನು ಆತ್ಮತ್ಯಾಗವಾದುದೆಂದು ಪರಿಗಣಿಸಲಾಗಿದೆ. ಹೀಗೆ ಪರಿಗಣಿಸುವವರು, ಆತ್ಮವನ್ನು ಸಾಯಿಸಿ ಉದ್ಧಾರವಾಗು - ಎಂಬ ಹೆಗೆಲ್‍ನ ವಚನವನ್ನು ಒಂದು ಆಧಾರವಾಗಿಯೂ ಅವನ ಸರ್ವಾಧಿಕಾರಿ ರಾಷ್ಟ್ರತತ್ವವನ್ನು ಇನ್ನೊಂದು ಆಧಾರವಾಗಿಯೂ ಕರೆಯುತ್ತಾರೆ. ಆತ್ಮತ್ಯಾಗವೇ ಪರಮವಲ್ಲ, ರಾಷ್ಟ್ರದ ಕಾಯಿದೆಗೆ ತಲೆಬಾಗಿ ನಡೆಯುವುದೇ ಪರಮಗುರಿಯಲ್ಲ. ಆತ್ಮಲಾಭವೇ ಪರಮಧ್ಯೇಯ. ಆತ್ಮತ್ಯಾಗ ಆತ್ಮಸಿದ್ಧಿಗೆ ಉಪಾಯ. ಹಾಗೆಯೇ ರಾಷ್ಟ್ರದ ಕಾಯಿದೆಗೆ ತಲೆಬಾಗಿ ನಡೆಯುವುದೇ ಅಂತಿಮ ಗುರಿಯಲ್ಲ. ರಾಷ್ಟ್ರದ ನಿಯಮಕ್ಕೆ ವಿಧೇಯನಾಗಿರುವುದರಿಂದ ಆತ್ಮ ವಿಶಾಲಗೊಳ್ಳುತ್ತದೆ, ವಿಕಾಸಗೊಳ್ಳುತ್ತದೆ - ಎಂದು ಹೆಗೆಲ್‍ನ ಇನ್ನೂ ಕೆಲವು ಅನುಯಾಯಿಗಳು (ಉದಾ : ಟಿ. ಎಚ್. ಗ್ರೀನ್) ವಾದಿಸುತ್ತಾರೆ.

ಪ್ರಾಚೀನ ಪಾಶ್ಚಾತ್ಯರಲ್ಲಿ ಪ್ಲೇಟೋನ ವಾದವನ್ನೂ ಆತ್ಮತ್ಯಾಗವಾದವಾಗಿ ಪರಿಗಣಿಸುವುದುಂಟು. ಹೆಣ್ಣು, ಹೊನ್ನು, ಮಣ್ಣು, ಅಧಿಕಾರ ಇವುಗಳ ವೈಯಕ್ತಿಕ ಸ್ವಾಮ್ಯವನ್ನು ಈತ ತಾತ್ವಿಕರಿಗೆ ನಿಷೇಧಿಸಿರುವುದು ಇವನ ಆತ್ಮತ್ಯಾಗದ ನೇರವಾದ ಪರಿಣಾಮ. ಈ ವಾದವನ್ನು ಅರಿಸ್ಟಾಟಲ್ ತನ್ನ ರಾಷ್ಟ್ರನೀತಿ ಗ್ರಂಥದಲ್ಲೂ ಧರ್ಮಶಾಸ್ತ್ರ ಗ್ರಂಥದಲ್ಲೂ ಖಂಡಿಸಿರುತ್ತಾನೆ. ಆಸ್ತಿಯ ತ್ಯಾಗ, ಕುಟುಂಬ ತ್ಯಾಗ, ಅಧಿಕಾರ ತ್ಯಾಗಗಳನ್ನು ಖಂಡಿಸಿದರೂ ಅರಿಸ್ಟಾಟಲ್ ಸ್ವೇಚ್ಛಾವಾದಿಯಲ್ಲ, ಸುಖವಾದಿಯಲ್ಲ, ಸ್ವಾರ್ಥವಾದಿಯಲ್ಲ. ಆತ ಮಿತವಾದಿ; ಎಲ್ಲದರಲ್ಲೂ ಅತಿಯನ್ನು ಬಿಟ್ಟು ಮಧ್ಯದ ಮಾರ್ಗವನ್ನು ಅನುಸರಿಸುವುದೇ ಸರಿಯಾದ ಧರ್ಮ, ನೀತಿ ಎಂಬುದು ಅವನ ವಾದ.

ಪ್ಲೇಟೋನ ಜೀವನತತ್ವಕ್ಕೂ ಅರಿಸ್ಟಾಟಲನ ಜೀವನತತ್ವಕ್ಕೂ ಅಗಾಧವಾದ ಅಂತರ ಕಲ್ಪಿಸುವುದು ಸರಿಯಲ್ಲ. ಆಸ್ತಿ, ಕುಟುಂಬಜೀವನ, ಅಧಿಕಾರಗಳನ್ನು ಎಲ್ಲರೂ ತ್ಯಜಿಸಬೇಕೆಂದು ಪ್ಲೇಟೋನ ಅಭಿಪ್ರಾಯವಲ್ಲ. ಈ ತ್ಯಾಗವನ್ನು ಅವನು ತಾತ್ವಿಕರಿಗೆ ಮಾತ್ರ ಕ್ಲುಪ್ತಗೊಳಿಸಿರುತ್ತಾನೆ. ಉಳಿದ ಸಾಮಾನ್ಯ ಜನರು ಅರಿಸ್ಟಾಟಲ್‍ನಂತೆಯೇ ಮಿತಜೀವನ ಮಾರ್ಗವನ್ನೂ, ಮಧ್ಯದ ನೀತಿಮಾರ್ಗವನ್ನೂ ಅವಲಂಬಿಸಬೇಕೆಂದು ಪ್ಲೇಟೊ ಬೋಧಿಸಿರುತ್ತಾನೆ. ಮಿತಭೋಗ, ಧೈರ್ಯ, ವಿವೇಕ, ನ್ಯಾಯ ಈ ನಾಲ್ಕು ಶೀಲಗಳನ್ನು ಪ್ಲೇಟೊ ಎತ್ತಿ ಹಿಡಿದಿದ್ದಾನೆ. ಅರಿಸ್ಟಾಟಲನ ಮಧ್ಯದ ನೀತಿಮಾರ್ಗತತ್ವ ಪ್ಲೇಟೋನ ಈ ನಾಲ್ಕು ಶೀಲಗಳಲ್ಲಿ ಅಡಗಿವೆ. ಸ್ವೇಚ್ಛಾ ವಿಹಾರವಾಗಲಿ, ಇಂದ್ರಿಯ ದಮನವಾಗಲಿ ನಿಜವಾದ ಶೀಲವಲ್ಲ. ಈ ಎರಡನ್ನೂ ಬಿಟ್ಟು ವಿವೇಕದ ಮಿತಭೋಗ ಒಂದು ಸೌಶೀಲ್ಯ. ಹಾಗೆಯೇ ಹೇಡಿತನವನ್ನೂ ಹಟಮಾರಿತನವನ್ನೂ ಬಿಟ್ಟು ಪೂರ್ವಾಪರಗಳನ್ನು ಅರಿತು ದೃಢಸಂಕಲ್ಪದಿಂದ ವರ್ತಿಸುವುದು ನಿಜವಾದ ಧೈರ್ಯ. ಕುರುಡು ನಂಬಿಕೆ ವಿವೇಕವಲ್ಲ. ಹಾಗೆಯೇ ವಿತರ್ಕ ವಿವೇಕವಲ್ಲ. ವಿಮರ್ಶಿಸಿ ನಂಬುವುದು ವಿವೇಕ. ಈ ಮೂರು ಶೀಲಗಳೂ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಈ ಮೂರರ ಒಕ್ಕಟ್ಟೇ ನ್ಯಾಯಮಾರ್ಗ.

ಸಂನ್ಯಾಸವನ್ನೇ ಆತ್ಮತ್ಯಾಗದ ಜೀವನವೆಂದೂ ನಿಶ್ರೇಯಸವೆಂದೂ ಕುಟುಂಬ ಜೀವವನ್ನು ಭೋಗಜೀವನವೆಂದೂ ಅಭ್ಯುದಯವೇ ಅದರ ಗುರಿಯೆಂದೂ ಇವೆರಡೂ ಒಂದಕ್ಕೊಂದು ವಿರುದ್ಧವಾದುವೆಂದೂ ಸಾಮಾನ್ಯವಾಗಿ ವರ್ಣಿಸುವುದುಂಟು. ಇವೆರಡೂ ವಿರುದ್ಧವಾಗಿರಬೇಕಾದ್ದಿಲ್ಲ. ಇವೆರಡರಲ್ಲೂ ಸಂಯಮವಿದೆ. ಸಂಯಮವಿಲ್ಲದ ನಡತೆ ಶೀಲವೆನ್ನಿಸಿಕೊಳ್ಳಲಾರದು. ಈ ಎರಡಕ್ಕೂ ವ್ಯತ್ಯಾಸವಿರುವುದು ಸಂಯಮದ ಪ್ರಮಾಣದಲ್ಲಿ ಮಾತ್ರವೇ.					
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ